Tuesday, 26 March 2013

How must you select your representative in upcoming election

ನಿಮ್ಮ ಪ್ರತಿನಿಧಿ ಸಭ್ಯನಾಗಿರಲಿ,
ಯೋಗ್ಯನಾಗಿರಲಿ, ಜ್ಞಾನಿಯಾಗಿರಲಿ
ಕುಮಾರಸ್ವಾಮಿ ವಚನದ್ರೋಹ
ಮಾಡಿದರು ಎಂಬುದನ್ನೇ ಅಸ್ತ್ರವನ್ನಾಗಿ
ಮಾಡಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ,
ಭ್ರಷ್ಟಾಚಾರದ ವಿಷಯದಲ್ಲಿ ಹಿಂದಿನ
ಎಲ್ಲ ಸರ್ಕಾರಗಳ
ದಾಖಲೆಗಳನ್ನು ಮೀರಿಸಿ ಮತ್ತೆ
ಚುನಾವಣೆಗೆ ಅಣಿಯಾಗತೊಡಗಿದೆ. ಅಂದ
ಹಾಗೆ ರಾಜ್ಯ ವಿಧಾನಸಭೆಗೆ
ಮೇ ಐದರಂದು ನಡೆಯಲಿರುವ ಚುನಾವಣೆ
ಅಂತಿಮವಾಗಿ ಕಾಂಗ್ರೆಸ್ ಮಿತ್ರಕೂಟ
ಅಧಿಕಾರಕ್ಕೆ ಬರುವಂತೆ ಮಾಡುತ್ತದೋ?
ಬಿಜೆಪಿ ಮಿತ್ರಕೂಟ ಅಧಿಕಾರಕ್ಕೆ ಬರುವಂತೆ
ಮಾಡುತ್ತದೋ? ಎಂಬುದಕ್ಕೆ
ಮೇ ಎಂಟರಂದು ಉತ್ತರ ಸಿಗಲಿದೆ. ಆದರೆ
ಅದಕ್ಕೂ ಮುನ್ನ
ನಾವು ಮತ್ತು ನೀವು ಸೇರಿ ನಮ್ಮ
ಜನಪ್ರತಿನಿಧಿಗಳಾಗುವವರು ಹೇಗಿರಬೇಕು?
ಎಂಬ ಪ್ರಶ್ನೆಗೆ ಉತ್ತರ
ಕಂಡುಕೊಳ್ಳಬೇಕಿದೆ.
ನನ್ನ ಪ್ರಕಾರ 2008ರ
ವಿಧಾನಸಭಾ ಚುನಾವಣೆಯಲ್ಲಿ
ಆಯ್ಕೆಯಾಗಿ ಬಂದ ಶಾಸಕರ ಪೈಕಿ
ಮುಕ್ಕಾಲು ಪಾಲು ಜನ
ಶಾಸಕರಾಗಲು ಅನರ್ಹರಾಗಿದ್ದವರು.
ಯಾಕೆಂದರೆ ಇವರಿಗೆ ಕರ್ನಾಟಕದ
ಆರು ಕೋಟಿ ಜನರ ಹಿತ ರಕ್ಷಿಸುವುದಕ್ಕಿಂತ
ಮುಖ್ಯವಾಗಿ ತಮ್ಮ, ತಮ್ಮ ಕುಟುಂಬದ,
ತಮ್ಮ ಬಂಧು ಬಳಗ, ಆಪ್ತರ
ಹಿತವೇ ಮುಖ್ಯವಾಗಿತ್ತು. ಒಂದು ವೇಳೆ
ಅವರಿಗೆ ಜನಹಿತವೇ ಮುಖ್ಯವಾಗಿದ್ದರೆ
ಕರ್ನಾಟಕ ದೇಶದ ಅತ್ಯಂತ ದೊಡ್ಡ
ಸಾಲಗಾರ ರಾಜ್ಯಗಳ ಪೈಕಿ
ಒಂದಾಗುತ್ತಿರಲಿಲ್ಲ. ಹದಿನೈದರಿಂದ
ಇಪ್ಪತ್ತು ಸಾವಿರ ಕೋಟಿ
ರುಪಾಯಿಗಳಷ್ಟು ಹಣ ತೆತ್ತು ವಿದ್ಯುತ್
ಖರೀದಿ ಮಾಡಿ ಲಂಚ ತಿನ್ನುವ ಕೆಲಸಕ್ಕೆ
ಅವಕಾಶ ಕೊಡುತ್ತಿರಲಿಲ್ಲ. ಐದು ವರ್ಷಗಳ
ಹಿಂದೆ ಕರ್ನಾಟಕದ
ರಸ್ತೆಗಳು ಹೇಗಿದ್ದವೋ ಇವತ್ತಿಗೂ ಹೆಚ್ಚು ಕಡಿಮೆ
ಅದೇ ಪರಿಸ್ಥಿತಿ ಇದೆ. ಎಲ್ಲೆಲ್ಲಿ ಟೋಲ್
ವಸೂಲು ಮಾಡುವ ಕೆಲಸ
ನಡೆಯುತ್ತಿದೆಯೋ ಆ
ರಸ್ತೆಗಳನ್ನು ಹೊರತುಪಡಿಸಿದರೆ ಉಳಿದಂತೆ
ರಸ್ತೆಗಳ ಅಭಿವೃದ್ಧಿ ವಿಷಯದಲ್ಲಿ
ಗಣನೀಯ ಪ್ರಗತಿ ಅಂತ ಆಗಿಯೇ ಇಲ್ಲ.
ಈಗ ಎಲೆಕ್ಷನ್ ಹತ್ತಿರ ಬಂದಿದೆ ಅಂತ
ಕೆಲವರು ಅಲ್ಲಿ ಇಲ್ಲಿ ಕನ್ಸರ್ವೆನ್ಸಿ
ರೋಡುಗಳಿಗೆ ಟಾರು ಮಾಡಿಸುತ್ತಿದ್ದಾರೆ.
ಆ ಮೂಲಕ ಜನರ ಕಣ್ಣೊರೆಸುವ ಕೆಲಸ
ಮಾಡುತ್ತಿದ್ದಾರೆ. ಆದರೆ
ನಾವು ಕೇಳಬೇಕಾದ ಪ್ರಶ್ನೆ ಎಂದರೆ ಬಿಜೆಪಿ
ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರಿ
ಸುಮಾರು ಮೂರೂ ಕಾಲು ಲಕ್ಷ ಕೋಟಿ
ರುಪಾಯಿಗಳಷ್ಟು ಹಣವನ್ನು ಅಭಿವೃದ್ಧಿಯ
ಹೆಸರಿನಲ್ಲಿ ವ್ಯಯ ಮಾಡಿದೆ.
ಲೆಕ್ಕಾಚಾರದ ಪ್ರಕಾರ ನೋಡಿದರೆ ಪ್ರತಿ
ವಿಧಾನಸಭಾ ಕ್ಷೇತ್ರದ ಬಾಬ್ತಿನಲ್ಲಿ
ಸಾವಿರದ ಇನ್ನೂರು ಕೋಟಿ ರುಪಾಯಿ
ಖರ್ಚಾಗಿರಬೇಕು. ಬೇಡ, ಕನಿಷ್ಠ ಪಕ್ಷ
ಐನೂರು ಕೋಟಿ
ರುಪಾಯಿಗಳಾದರೂ ಖರ್ಚಾಗಿರಬೇಕು.
ನಿಜಕ್ಕೂ ಅಷ್ಟು ಕೆಲಸ ಆಗಿದೆಯೇ?
ನೋ ಛಾನ್ಸ್. ಕೆಲವು ಸೀಮಿತ
ಕ್ಷೇತ್ರಗಳನ್ನು ಹೊರತುಪಡಿಸಿದರೆ
ಉಳಿದಂತೆ ಬಹುತೇಕ
ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯ
ಹೆಸರಿನಲ್ಲಿ ನಡೆದಿದ್ದು ಶುದ್ಧ
ಹಗಲು ದರೋಡೆ. ಬೆಂಗಳೂರಿನ ಕೆಲ
ಶಾಸಕರಂತೂ ಟಾರಿದ್ದ ರಸ್ತೆಗೇ ಮತ್ತೆ
ಮತ್ತೆ ಟಾರು ಹಾಕಿಸಿದ ನಾಟಕವಾಡಿ
ಬಿಲ್ಲು ಕೊಟ್ಟರು, ದಂಡಿಯಾಗಿ ದೋಚಿ
ತಿಂದರು.
ಇದೀಗ
ಮತ್ತೊಂದು ರೌಂಡು ತಿನ್ನಲು ಅವಕಾಶ
ಸಿಗುತ್ತದಾ ಅಂತ ರೆಡಿ ಆಗುತ್ತಿದ್ದಾರೆ.
ನಿಜಕ್ಕೂ ಇಂತಹ ಪರಿಸ್ಥಿತಿಯಲ್ಲಿ ನಮಗೆ
ಎಂತಹ ಸರ್ಕಾರ
ಬೇಕು ಅನ್ನುವುದು ಎಷ್ಟು ಮುಖ್ಯವೋ,
ಎಂತಹ ಪ್ರತಿನಿಧಿ
ಬೇಕು ಅನ್ನುವುದೂ ಅಷ್ಟೇ ಮುಖ್ಯವಾಗಬೇಕು.
ಬಾಕಿ ಇರುವುದು ಕೇವಲ ಮೂವತ್ತು ಚಿಲ್ಲರೆ
ದಿನಗಳಾದ್ದರಿಂದ ಹೇಳುತಿದ್ದೇನೆ. ನಿಮ್ಮ
ಕ್ಷೇತ್ರದಲ್ಲಿ ಸ್ಪರ್ಧಿಸುವ
ಕ್ಯಾಂಡಿಡೇಟುಗಳನ್ನು ಸುಖಾಸುಮ್ಮನೆ
ನಂಬಬೇಡಿ. ಆತ ನಿಜಕ್ಕೂ ಕ್ಷೇತ್ರದ ಹಿತ
ಕಾಪಾಡಲು ಅರ್ಹನಾಗಿದ್ದಾನಾ? ಆತನಿಗೆ
ಕ್ಷೇತ್ರವನ್ನು ಅಭಿವೃದ್ಧಿಪಡಿಸುವ
ವಿಷಯದಲ್ಲಿ ಒಂದು ದೃಷ್ಟಿಕೋನ
ಇದೆಯಾ? ಒಂದು ವೇಳೆ ಆಡಳಿತ ಪಕ್ಷದ
ಸಾಲಿನಲ್ಲಿ ಕೂರುವ ಅವಕಾಶ
ಸಿಗದೇ ವಿರೋಧ ಪಕ್ಷದ ಸ್ಥಾನದಲ್ಲಿ
ಕುಂತರೂ ಕ್ಷೇತ್ರದ ಜನರ ಸಮಸ್ಯೆಗೆ
ಉತ್ತರ ಹುಡುಕುವ ಶಕ್ತಿ ಆತನಿಗೆ
ಇದೆಯಾ? ಈ ಎಲ್ಲ ಪ್ರಶ್ನೆಗಳಿಗೆ
ನೀವು ಉತ್ತರ ಕಂಡುಕೊಳ್ಳಬೇಕು.
ಇವತ್ತು ಬಿಜೆಪಿಯಿಂದ ಹಿಡಿದು ಬಿಎಸ್ಆರ್
ಕಾಂಗ್ರೆಸ್ ಪಕ್ಷದ ತನಕ, ಕಾಂಗ್ರೆಸ್ನಿಂದ
ಹಿಡಿದು ಜೆಡಿಎಸ್ ತನಕ
ಪ್ರತಿಯೊಂದು ರಾಜಕೀಯ
ಪಕ್ಷಗಳು ಭರವಸೆಗಳ
ಮಹಾಪೂರವನ್ನೇ ಹರಿಸುತ್ತಿವೆ. ಬಿಎಸ್ಆರ್
ಕಾಂಗ್ರೆಸ್ನ ರಾಮುಲು ಅಧಿಕಾರಕ್ಕೆ ಬಂದರೆ
ಉಚಿತ ಮದುವೆಯಿಂದ ಹಿಡಿದು, ಉಚಿತ
ವಿದ್ಯಾಭ್ಯಾಸದ ತನಕ ಎಲ್ಲವೂ ಫ್ರೀ.
ಕುಮಾರಸ್ವಾಮಿ ಏನಾದರೂ ಸಿಎಂ ಆದರೆ
ಮೊಟ್ಟ ಮೊದಲು ಹೊರಡಿಸುವ
ಆರ್ಡರು ಏನು ಗೊತ್ತಾ ರೈತರು ಮಾಡಿರುವ
ಸಾಲ ಮನ್ನಾ ಮಾಡಿಬಿಡುವುದು.
ಇನ್ನು ಬಿಜೆಪಿಯ ಮಾತು ಬಿಡಿ. ಕಳೆದ
ಚುನಾವಣೆಯ ಸಂದರ್ಭದಲ್ಲಿ ಕೊಟ್ಟ
ಭರವಸೆಗಳು ಪೂರ್ತಿಯಾಗಿ
ಈಡೇರದೇ ಇರುವುದರಿಂದ ಅದರ ಜತೆಗೆ
ಇನ್ನಷ್ಟು ಉಚಿತ
ಭರವಸೆಗಳನ್ನು ಕೊಡಬಹುದು. ಆದರೆ
ನೆನಪಿಡಿ, ಭರವಸೆ ಕೊಡುವ ಪಕ್ಷಗಳಿಗೆ
ನಿಜಕ್ಕೂ ಆ ಶಕ್ತಿ ಇದೆಯಾ?
ಅಥವಾ ಅವರು ಕೊಟ್ಟ
ಭರವಸೆಗಳನ್ನು ಈಡೇರಿಸುವ ಶಕ್ತಿ
ಸರ್ಕಾರದ ಬೊಕ್ಕಸಕ್ಕಿದೆಯಾ?
ಅನ್ನುವುದನ್ನು ನಾವು ಸೂಕ್ಷ್ಮವಾಗಿ
ಗಮನಿಸಬೇಕು. ಅದಕ್ಕೂ ಮುನ್ನ
ಆಯಾ ಕ್ಷೇತ್ರದ ಜನ, ಪಕ್ಷ ಬೇಧ
ಮರೆತು ತಮ್ಮ ತಮ್ಮ
ಕ್ಯಾಂಡಿಡೇಟುಗಳನ್ನು ಒಂದು ವೇದಿಕೆಯ
ಮೇಲೆ ತಂದು ಕ್ಷೇತ್ರದ ಅಭಿವೃದ್ಧಿಗೆ
ಸಂಬಂಧಿಸಿದಂತೆ ನಿಮ್ಮ ದೃಷ್ಟಿಕೋನ
ಏನು? ಅನ್ನುವ ಪ್ರಶ್ನೆಗೆ ಉತ್ತರ
ಪಡೆಯಬೇಕು.
ಇವತ್ತು ಅಮೆರಿಕಾದಲ್ಲಿ ಅಧ್ಯಕ್ಷ
ಚುನಾವಣೆಯ ಕಣಕ್ಕಿಳಿಯುವವರು ತಮ್ಮ
ದೇಶದ ಅಭಿವೃದ್ಧಿಯಿಂದ ಹಿಡಿದು, ಜಗತ್ತಿನ
ಮಧ್ಯೆ ಓಡುವ ತನಕ
ನಾವು ಏನು ಮಾಡಬಲ್ಲೆವು ಅನ್ನುವುದನ್ನು ಬಹಿರಂಗವಾಗಿ
ಹೇಳಬೇಕಾಗುತ್ತದೆ. ಆದರೆ
ನಾವು ಯಾವತ್ತಾದರೂ ನಮ್ಮ
ಕ್ಷೇತ್ರದಲ್ಲಿ ಸ್ಪರ್ಧಿಸುವ
ಅಭ್ಯರ್ಥಿಗಳನ್ನು ಈ ರೀತಿ
ಒಂದು ವೇದಿಕೆಯ ಮೇಲೆ ಕೂರಿಸಿ ಪ್ರಶ್ನೆ
ಮಾಡಿದ್ದೇವಾ? ಹೀಗೆ ನೀವು ಪ್ರಶ್ನೆ
ಮಾಡುವ ಗುಣ, ಇಚ್ಛಾಶಕ್ತಿ
ನಿಮ್ಮಲ್ಲಿಲ್ಲದೇ ಹೋದರೆ ಮುಂಬರುವ
ಚುನಾವಣೆಯಲ್ಲಿ ನೀವು ಮತಗಟ್ಟೆಗೆ
ಹೋಗಿ ಮತ ಹಾಕುತ್ತೀರಿ ಎಂಬುದೂ ಡೌಟು.
ದಯವಿಟ್ಟು ಹಾಗೆ ಮಾಡಬೇಡಿ. ಈ ರೀತಿ
ಪ್ರಶ್ನೆ ಹಾಕಲು ಸಾವಿರಾರು ಜನ ಸೇರಿ
ಪ್ರಯತ್ನ ಮಾಡಬೇಕಿಲ್ಲ. ಹತ್ತರಿಂದ
ಇಪ್ಪತ್ತು ಜನ ಸೇರಿ ಒಂದು ವೇದಿಕೆ
ಸೃಷ್ಟಿಸಿಕೊಳ್ಳಿ ಸಾಕು. ಆ ವೇದಿಕೆಯ ಮೇಲೆ
ಬಂದು ಶಾಸಕನಾಗಲು ನನಗಿರುವ ಅರ್ಹತೆ
ಏನು? ಅನ್ನುವುದನ್ನು ಸ್ಪರ್ಧಿ
ಸಾರ್ವಜನಿಕವಾಗಿ ಹೇಳಲಿ ಅಂತ
ಒತ್ತಾಯಿಸಿ. ಒಂದು ಸಲ ಈ ಒತ್ತಾಯ
ಕೇಳಿ ಬಂದರೆ ಸಹಜವಾಗಿಯೇ ಸಾವಿರ ಜನ
ವೇದಿಕೆಯ ಮುಂದೆ ಬಂದು ನಿಲ್ಲುತ್ತಾರೆ.
ನಿಮ್ಮ ಕ್ಷೇತ್ರದ
ಶಾಸಕನಾಗಲು ಬಯಸುವವನಿಗೆ
ಇರಬೇಕಾದ್ದು ಮುಖ್ಯವಾಗಿ ಹಣ
ಬಲವಲ್ಲ, ಜನರ ಹಿತ ರಕ್ಷಿಸುವ ಹಂಬಲ
ಎಂಬುದು ಈ ವೇದಿಕೆಯ ಮೂಲಕ ಮನವರಿಕೆ
ಮಾಡಿಕೊಡಿ. ಹಾಗೆ
ಮಾಡಿಕೊಡದೇ ಹೋದರೆ ಏನಾಗುತ್ತದೆ?
ದುಡ್ಡಿನ ತಾಖತ್ತು, ಜಾತಿಯ
ತಾಖತ್ತು ಇರುವ
ಕ್ಯಾಂಡಿಡೇಟು ಸುಲಭವಾಗಿ
ಗೆದ್ದು ಬರುತ್ತಾನೆ. ಮೊನ್ನೆ ನಡೆದ ನಗರ
ಸ್ಥಳೀಯ ಸಂಸ್ಥೆಗಳ ಚುನಾವಣೆ
ಇದೆಯಲ್ಲ, ಆ ಚುನಾವಣೆಯ ಸಂದರ್ಭದಲ್ಲಿ
ಕೆಲವು ವಾರ್ಡುಗಳಲ್ಲಿ
ಐವತ್ತು ಲಕ್ಷದಿಂದ, ಒಂದು ಕೋಟಿ
ರುಪಾಯಿ ತನಕ ಸುರಿದು ಗೆದ್ದ
ಕ್ಯಾಂಡಿಡೇಟುಗಳಿದ್ದಾರೆ. ಅಫ್ಕೋರ್ಸ್
ಕೆಲವು ಕಡೆ ಜನರ ಪ್ರೀತಿ ಗಳಿಸಿದ
ಕ್ಯಾಂಡಿಡೇಟುಗಳೂ ಗೆದ್ದಿದ್ದಾರೆ. ಆದರೆ
ಅಸೆಂಬ್ಲಿ ಚುನಾವಣೆ ಹಾಗಲ್ಲ. ಅಲ್ಲಿ
ಜಾತಿ ಮತ್ತು ದುಡ್ಡಿನ ಬಲ
ಎಂಬುದು ದೊಡ್ಡ ಮಟ್ಟದಲ್ಲಿ
ಇರಲೇಬೇಕು ಎಂಬ ಪರಿಸ್ಥಿತಿ ಇದೆ. ಆ
ಪರಿಸ್ಥಿತಿಯನ್ನು ಬದಲಿಸಲು ನಿಮಗೆ
ಸಾಧ್ಯವಾಗಬೇಕು. ತಿರುಗಿ ನೋಡಿದರೆ
ಇವತ್ತಿನ ಕರ್ನಾಟಕದ ಪರಿಸ್ಥಿತಿ ಹೇಗಿದೆ?
ನಿಮಗೆ ಬಂಗಾರದ ಬಾಳು ಕೊಡುತ್ತೇವೆ
ಎಂದ ಬಿಜೆಪಿ ಐದು ವರ್ಷಗಳ ಅವಧಿಯಲ್ಲಿ
ರಾಜ್ಯದ ಹಣಕಾಸಿನ
ಪರಿಸ್ಥಿತಿಯನ್ನು ಹಡಾಲೆಬ್ಬಿಸಿಬಿಟ್ಟಿದೆ.
ಟೈಮು ಟೈಮಿಗೆ
ಕರೆಂಟು ಕೊಡುವುದು ಹಾಗಿರಲಿ, ಈ
ಬೇಸಿಗೆಯಲ್ಲಿ ನೆಟ್ಟಗೆ ಕುಡಿಯುವ
ನೀರು ಕೊಡುವ
ಸಾಮರ್ಥ್ಯವನ್ನೂ ಅದು ಉಳಿಸಿಕೊಂಡಿಲ್ಲ.
ಐದು ವರ್ಷದಲ್ಲಿ ಬರೋಬ್ಬರಿ
ಮೂರೂಕಾಲು ಲಕ್ಷ ಕೋಟಿ ರುಪಾಯಿ
ವೆಚ್ಚ ಮಾಡಿ ಕರ್ನಾಟಕವನ್ನು ಅದು ಈ
ಸ್ಥಿತಿಗೆ ತಂದಿದೆ ಅಂದ
ಮೇಲೂ ನೀವು ನಿಮ್ಮ ಕ್ಷೇತ್ರದಿಂದ
ಎಂಥವರು ಶಾಸಕರಾಗಬೇಕು ಅನ್ನುವುದನ್ನು ಪಕ್ಕಾ ಮಾಡಿಕೊಳ್ಳದಿದ್ದರೆ
ಐದು ವರ್ಷ ಕಳೆಯುವುದರ ಒಳಗಾಗಿ
ಇನ್ನೂ ಗಂಡಾಂತರದ
ಪರಿಸ್ಥಿತಿಯನ್ನು ನೋಡಲಿದ್ದೀರಿ.
ಇದನ್ನು ನಾನೇಕೆ ಹೇಳುತ್ತಿದ್ದೇನೆಂದರೆ
ಒಂದು ವ್ಯವಸ್ಥೆಯನ್ನು ಉದ್ಧಾರ
ಮಾಡಲು ಒಬ್ಬ ಒಳ್ಳೆಯ ಮುಖ್ಯಮಂತ್ರಿ
ಬಂದರೆ ಸಾಲದು, ಬದಲಿಗೆ ಪ್ರತಿ
ಒಂದು ಕ್ಷೇತ್ರದಿಂದಲೂ ಅರ್ಹರು ಗೆದ್ದು ಬರಬೇಕು.
ತನ್ನ ಕ್ಷೇತ್ರದ ಜನರಿಗೆ ಕುಡಿಯುವ
ನೀರು, ಕರೆಂಟು, ಪಡಿತರ ವ್ಯವಸ್ಥೆಯ
ಮೂಲಕ ಕಾಲಕಾಲಕ್ಕೆ ಆಹಾರ ಪದಾರ್ಥ
ಒದಗಿಸುವ ವಿಷಯದಲ್ಲಿ
ಆತನಿಗೊಂದು ಬದ್ಧತೆ ಇರಬೇಕು.
ಕುಡಿಯುವ ನೀರಿಗೆ ಸರ್ಕಾರ ಹಣ
ಕೊಡಲಿಲ್ಲ ಅಂತಿಟ್ಟುಕೊಳ್ಳಿ. ಆತ
ಕ್ಷೇತ್ರದಲ್ಲಿರುವ ಹಣವಂತರ
ನೆರವು ಪಡೆದು, ಬಡ ಮಧ್ಯಮ ವರ್ಗದವರ
ಸಹಕಾರ ಪಡೆದು ಸಣ್ಣ ಸಣ್ಣ
ಯೋಜನೆಗಳನ್ನು ಜಾರಿ ಮಾಡುವ
ಶಕ್ತಿಯನ್ನು ಇಟ್ಟುಕೊಂಡಿರಬೇಕು.
ಸಮುದಾಯದ ಸಹಭಾಗಿತ್ವದ ಮೂಲಕ
ಜಾರಿಯಾಗುವ ಇಂತಹ
ಕೆಲಸಗಳು ದಿನನಿತ್ಯದ
ಬದುಕನ್ನು ನಿರ್ವಹಿಸುವ ವಿಷಯದಲ್ಲಿ
ನಮ್ಮ ಪಾಲೂ ಇರಬೇಕು ಎಂಬ ಎಚ್ಚರಿಕೆ
ಜನರಲ್ಲಿ ಮೂಡುವಂತೆ ಮಾಡುತ್ತವೆ.
ಅಂತಹ ಎಚ್ಚರಿಕೆ ಮೂಡಿಸುವವನು ನಿಜವಾದ
ಶಾಸಕ. ವಿಧಾನಸಭೆಯಲ್ಲಿ
ನಮ್ಮನ್ನು ಪ್ರತಿನಿಧಿಸಲು ಅರ್ಹ.
ಇವತ್ತು ಕೆರೆಗಳ ಹೂಳು ಎತ್ತುವ
ವಿಷಯದಿಂದ
ಹಿಡಿದು ಯಾವುದೇ ವಿಷಯವನ್ನು ತೆಗೆದುಕೊಳ್ಳಿ.
ಯಾಕೆ ಅವು ನೂರಕ್ಕೆ
ನೂರು ಯಶಸ್ವಿಯಾಗುತ್ತಿಲ್ಲ ಎಂದರೆ
ಮುಖ್ಯವಾಗಿ ಶಾಸಕರಾದವರು ಈ
ಕೆಲಸವನ್ನು ಪ್ರಾಮಾಣಿಕವಾಗಿ
ಮಾಡಿಸಲು ಆಸಕ್ತರಾಗಿಲ್ಲ
ಎಂಬುದು ನಿಜವಾದ ಕಾರಣ. ಇದಕ್ಕಾಗಿ
ಬಂದ ಹಣದ ಪೈಕಿ ಅರ್ಧಕ್ಕರ್ಧ
ದುಡ್ಡನ್ನು ತಾನು, ತನ್ನ ಬೆಂಬಲಿಗರು,
ಅಧಿಕಾರಿಗಳು ಹಂಚಿಕೊಂಡು,
ಇದನ್ನು ಪ್ರಶ್ನಿಸುವವರ ಬಾಯಿ
ಮುಚ್ಚಿಸಲು ಒಂದಷ್ಟು ಹಣ
ಸುರಿದು ಒಟ್ಟಿನಲ್ಲಿ
ಇಡೀ ಯೋಜನೆಯೇ ಎಕರಾ ಪೆಕರಾ ಆಗುವಂತೆ
ಮಾಡಿಬಿಟ್ಟರೆ ಕುಡಿಯುವ
ನೀರಿಗೂ ತತ್ವಾರ ಅನ್ನುವಂತಹ ಪರಿಸ್ಥಿತಿ
ನಿರ್ಮಾಣವಾಗುವುದು ಸಹಜ.
ವಸ್ತುಸ್ಥಿತಿ ಎಂದರೆ ಜಾಗತೀಕರಣದ ಈ
ಕಾಲಘಟ್ಟದಲ್ಲಿ,
ಇಡೀ ದೇಶವೇ ಕಾರ್ಪೋರೇಟ್ ಸಂಸ್ಥೆಗಳ
ಹಿಡಿತಕ್ಕೆ ಜಾರುತ್ತಿರುವ ಈ ಸಂದರ್ಭದಲ್ಲಿ
ವಿಧಾನಸಭೆಗೆ, ಲೋಕಸಭೆಗೆ ಆಯ್ಕೆಯಾಗಿ
ಹೋಗುವ ನಮ್ಮ ಜನಪ್ರತಿನಿಧಿಗಳಿಗೆ ಆ
ಕುರಿತು ಜ್ಞಾನವಿರಬೇಕು. ಪಾಶ್ಚಿಮಾತ್ಯ
ರಾಷ್ಟ್ರಗಳ ಕಪಿಮುಷ್ಟಿಗೆ ಸಿಲುಕಿರುವ
ಭಾರತ ಎಂಬ ದೇಶದ ಭಾಗವಾಗಿ,
ಕರ್ನಾಟಕವೂ ಎಕ್ಕುಟ್ಟಿ ಹೋಗುತ್ತಿದೆ
ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಸಾಲದ ಮೇಲೆ ಸಾಲ ಕೊಟ್ಟು,
ನಮ್ಮನ್ನು ಸಾಲದ ಸುಳಿಯಲ್ಲಿ
ಸಂಪೂರ್ಣವಾಗಿ ಸಿಲುಕಿಸಿ, ಕುಡಿಯುವ
ನೀರಿನಿಂದ ಹಿಡಿದು, ಉಸಿರಾಡುವ ಗಾಳಿಯ
ತನಕ ಎಲ್ಲವನ್ನೂ ಹಣ ಕೊಟ್ಟು ಖರೀದಿ
ಮಾಡುವ
ಸ್ಥಿತಿಯನ್ನು ರೂಪಿಸಲು ಅವು ಸಂಚು ಮಾಡುತ್ತಿರುವಾಗ
ಅದರ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ
ಜನ ಶಾಸಕರಾದರೆ ನಮ್ಮ, ನಿಮ್ಮ ಗತಿ
ಏನಾಗಬೇಕು?
ಯಾವಾಗ ನಮ್ಮ ಜನಪ್ರತಿನಿಧಿಗಳಿಗೆ
ನಮ್ಮ ದೇಶ ಅಮೆರಿಕಾ ನೇತೃತ್ವದ
ಪಾಶ್ಚಿಮಾತ್ಯ ದೇಶಗಳ ಹಿಡಿತದಲ್ಲಿದೆ
ಅನ್ನುವುದರ ಅರಿವಿರುವುದಿಲ್ಲವೋ, ಆಗ
ನಮ್ಮ ರೈತರ ಭೂಮಿಯನ್ನು ಖಾಸಗಿ
ಕಂಪನಿಗಳಿಗೆ ವಶಪಡಿಸಿಕೊಡುವ ಕೆಲಸಕ್ಕೆ
ಮುಲಾಜೇ ಇಲ್ಲದೆ ಬೆಂಬಲ ಕೊಡುತ್ತಾರೆ.
ಆ ಮೂಲಕ ನಮ್ಮ ಜನರನ್ನೇ ನಾವು ಬೀದಿ
ಪಾಲು ಮಾಡುತ್ತೇವೆ ಎಂಬ ಕನಿಷ್ಠ
ಪ್ರಜ್ಞೆಯೂ ನಮ್ಮ
ಶಾಸಕರಿಗಿಲ್ಲದೇ ಹೋದರೆ ಏನಾಗುತ್ತದೆ
ಮುಂದಿನ ಒಂದೆರಡು ದಶಕಗಳಲ್ಲಿ
ನಾವು ಸಂಪೂರ್ಣವಾಗಿ
ಪರಾವಲಂಬಿಗಳಾಗುವ ಸ್ಥಿತಿ
ನಿರ್ಮಾಣವಾಗುತ್ತದೆ.
ಈಗಾಗಲೇ ರಾಜ್ಯಕ್ಕೆ
ಅಗತ್ಯವಾದಷ್ಟು ಆಹಾರ ಧಾನ್ಯ
ಬೆಳೆಯುವ ಶಕ್ತಿಯೂ ನಮಗಿಲ್ಲ. ನೈಸ್
ಯೋಜನೆಯಿಂದ ಹಿಡಿದು ಕಂಡ ಕಂಡ
ಯೋಜನೆಗಳಿಗೆಲ್ಲ ಫಲವತ್ತಾದ ಭೂಮಿ
ಕೊಟ್ಟು ಆಹಾರ
ಪದಾರ್ಥಗಳನ್ನು ಬೆಳೆಯುವ
ಸಾಮರ್ಥ್ಯವೇ ಕಡಿಮೆ ಆಗಿದೆ.
ಇದೇ ಪರಿಸ್ಥಿತಿ ಮುಂದುವರಿದರೆ ನಾಳೆ ಬಡ
ಮಧ್ಯಮ ವರ್ಗದ ಜನ ತಿನ್ನುವ
ಅನ್ನಕ್ಕೂ ಪರದಾಡುವ ಸ್ಥಿತಿ
ನಿರ್ಮಾಣವಾಗುತ್ತದೆ. ನಮ್ಮ
ಜನಪ್ರತಿನಿಧಿಗಳಾಗುವವರಿಗೆ ಈ
ಕುರಿತು ಕನಿಷ್ಠ
ಜ್ಞಾನವಾದರೂ ಇರಬೇಕಲ್ಲವೇ?
ಇಂತಹ ಜ್ಞಾನ ಇಲ್ಲದವರು,
ದುಡ್ಡು ಹಾಕಿ ಲೂಟಿ
ಮಾಡಬೇಕೆಂದು ಬಯಸುವವರು, ಕ್ಷೇತ್ರದ
ಜನ ನೆಮ್ಮದಿಯಿಂದ
ಇರಲು ಏನು ಮಾಡಬೇಕು ಎಂಬ
ದೂರದೃಷ್ಟಿಯೂ ಇಲ್ಲದವರು ನಿಮ್ಮ
ಕ್ಷೇತ್ರಗಳ ಪ್ರತಿನಿಧಿಗಳಾಗಿ
ಬಂದು ಕೂತರೆ ಏನು ಮಾಡುತ್ತೀರಿ?
ಹೀಗಾಗಿಯೇ ನಾನು ಹೇಳುತ್ತಿರುವುದು.
ಮೊದಲು ನಿಮ್ಮ
ಜನಪ್ರತಿನಿಧಿಯಾಗಲು ಬಯಸುತ್ತಿರುವವರನ್ನು ಒಂದು ವೇದಿಕೆಯ
ಮೇಲೆ ಕೂರಿಸಿ, ಕ್ಷೇತ್ರದ ಅಭಿವೃದ್ಧಿಗೆ
ಸಂಬಂಧಿಸಿದಂತೆ ಅವರಿಗಿರುವ ದೃಷ್ಟಿಕೋನ
ಏನು? ಕರ್ನಾಟಕ ಇವತ್ತು ಯಾವ
ಸ್ಥಿತಿಯಲ್ಲಿದೆ? ಜಾಗತೀಕರಣದ ಪ್ರಭಾವ
ನಮ್ಮ ದೇಶದ ಮೇಲೆ, ನಮ್ಮ ರಾಜ್ಯದ
ಮೇಲೆ, ಆ ಮೂಲಕ ನಮ್ಮ ಕ್ಷೇತ್ರದ
ಮೇಲೆ ಯಾವ ರೀತಿಯ ಪ್ರಭಾವ
ಬೀರುತ್ತದೆ ಎಂಬ
ಅರಿವು ಅವರಲ್ಲಿದೆಯಾ ಗಮನಿಸಿ ನೋಡಿ.
ಒಂದು ವೇಳೆ ಈ ಕೆಲಸವನ್ನೇ ಮಾಡದೆ
ದುಡ್ಡಿದ್ದವನು, ಜಾತಿಯ
ಬಲವಿದ್ದವನು ಗೆದ್ದು ಬರಲಿ ಅಂತ
ನಿರ್ಲಕ್ಷ್ಯ ತೋರಿದಿರೋ, ಅದಕ್ಕಾಗಿ
ನೀವು ದೊಡ್ಡ ಬೆಲೆಯನ್ನೇ ತೆರುತ್ತೀರಿ.
ಹಿಂದೆಲ್ಲ ಆಗಿರುವುದು ಇದೇ. ಆದರೆ ಈ ಸಲ
ಅದಕ್ಕೆ ನೀವು ಅವಕಾಶ ಕೊಡುವುದಿಲ್ಲ
ಎಂದು ನಾನು ಭಾವಿಸುತ್ತೇನೆ.
ದಯವಿಟ್ಟು ನಿರಾಸೆ ಮಾಡಬೇಡಿ. ಪ್ಲಿಸ್  ..,RB Writes

No comments:

Post a Comment